ಇಕಬಾಲ್ ಡಾ, ಮುಹಮದ್
1877-1938. ಉರ್ದು ಮತ್ತು ಪರ್ಷಿಯನ್ ಭಾಷೆಗಳ ಶ್ರೇಷ್ಠ ಆಧುನಿಕ ಕವಿ. ಜನನ ಸಿಯಾಲ್ ಕೋಟ್‍ನಲ್ಲಿ. ಅರಬ್ಬೀ, ಪರ್ಷಿಯನ್ ಮತ್ತು ತತ್ತ್ವಶಾಸ್ತ್ರಗಳ ಪಂಡಿತನಾಗಿದ್ದ. ಈತನ ಪೂರ್ವಜರು ಕಾಶ್ಮೀರ ಬ್ರಾಹ್ಮಣರಾಗಿದ್ದರು. ಪಂಜಾಬ್ ವಿಶ್ವವಿದ್ಯಾನಿಲಯದ ಕಲಾವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೇಂಬ್ರಿಜ್ ಮತ್ತು ಮ್ಯುನಿಚ್ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪದವಿಗಳನ್ನು ಪಡೆದ. ಅನಂತರ ಲಂಡನ್ ಬಾರ್‍ನಲ್ಲಿ ಪ್ರವೇಶಪಡೆದ. ಕೆಲಕಾಲ ಲಂಡನ್ ವಿಶ್ವವಿದ್ಯಾನಿಲಯದ ಅರಬ್ಬೀ ಪ್ರಾಧ್ಯಾಪಕನಾಗಿಯೂ ಪಂಜಾಬ್ ವಿಶ್ವವಿದ್ಯಾನಿಲಯದ ತತ್ತ್ವಶಾಸ್ತ್ರದ ವರಿಷ್ಠ ಪ್ರಾಧ್ಯಾಪಕನಾಗಿಯೂ ಇದ್ದು ಅನಂತರ ಲಾಹೋರ್‍ನಲ್ಲಿ ವಕೀಲಿ ವೃತ್ತಿಯನ್ನು ಕೈಗೊಂಡ. 1923ರಲ್ಲಿ ಈತನ ಪ್ರಸಿದ್ಧ ದಾರ್ಶನಿಕ ಕೃತಿ ಅಸ್ರಾರೆ ಖುದಿಯನ್ನು (ಆತ್ಮರಹಸ್ಯ-1915) ನೋಡಿ ಬ್ರಿಟಿಷ್ ಸರ್ಕಾರ ಸರ್ ಪದವಿಯನ್ನು ಕೊಟ್ಟು ಗೌರವಿಸಿತು. 1926ರಲ್ಲಿ ಪಂಜಾಬ್ ವಿಧಾನಸಭೆಗೆ ಚುನಾಯಿತನಾದ. 1928ರಲ್ಲಿ ಮದ್ರಾಸಿನಲ್ಲಿ ಈತ ಇಸ್ಲಾಂ ದರ್ಶನದ ಮೇಲೆ ಆರು ಉಪನ್ಯಾಸಗಳನ್ನು ಮಾಡಿದ. ಅವು ಆರು ಉಪನ್ಯಾಸಗಳು ಎಂಬ ಹೆಸರಿನಲ್ಲಿ ಪ್ರಕಟವಾಗಿ ಅನಂತರ ಇಸ್ಲಾಂನಲ್ಲಿ ಧಾರ್ಮಿಕ ವಿಚಾರದ ಪುನರ್ರಚನೆ ಎಂಬ ಹೆಸರಿನಲ್ಲಿ ಪುನರ್‍ಮುದ್ರಿತವಾದುವು. 1929ರಲ್ಲಿ ಈತ ಮೈಸೂರು ಮತ್ತು ಹೈದರಾಬಾದನ್ನು ಸಂದರ್ಶಿಸಿದ. ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನ್ ಗೋರಿಯ ಬಳಿ ನಿಂತಾಗ ಡಾಂಟೆಯ ಡಿವೈನ್ ಕಾಮೆಡಿಗೆ ಉತ್ತರವಾದ ಈತನ ಸರ್ವಶ್ರೇಷ್ಠಕೃತಿ ಜಾವೀದ್‍ನಾಮಕ್ಕೆ ಪ್ರೇರಣೆಯುಂಟಾಯಿತು. 1931ರಲ್ಲಿ ಎರಡನೆಯ ದುಂಡು ಮೇಜಿನ ಪರಿಷತ್ತಿಗೆ ಪ್ರತಿನಿಧಿಯಾಗಿ ಲಂಡನ್ನಿಗೆ ಹೋದ. ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಪ್ಯಾಲಸ್ಟೈನ್‍ಗಳಲ್ಲಿ ಸಂಚಾರ ಮಾಡಿದ. ಬರ್ಗ್‍ಸನ್ ಮತ್ತು ಮುಸೋಲಿನಿಯನ್ನು ಭೇಟಿಯಾಗಿದ್ದ. 1933ರಲ್ಲಿ ನಾದಿರ್‍ಶಹ ರಾಜನಿಂದ ಆಹ್ವಾನಿತನಾಗಿ ಶೈಕ್ಷಣಿಕ ಸುಧಾರಣೆಯ ವಿಷಯವಾಗಿ ಸಲಹೆಯನ್ನು ನೀಡಲು ಆಫ್ಘಾನಿಸ್ತಾನಿಗೆ ಹೋಗಿದ್ದ. 1930ರಲ್ಲಿ ಮುಸ್ಲಿಂ ಲೀಗಿನ ಅಲಹಾಬಾದಿನ ಅಧಿವೇಶನದಲ್ಲಿ ಅಧ್ಯಕ್ಷ ಪದವಿಯಿಂದ ಮೊಟ್ಟಮೊದಲು ಸಮಗ್ರ ಭಾರತವನ್ನು ಒಡೆದು ಪಾಕಿಸ್ತಾನ ರಚನೆ ಮಾಡುವ ವಿಚಾರವನ್ನು ಮುಂದಿಟ್ಟ.

ಈತ ಕ್ರಾಂತಿಕಾರಿ ಕವಿ. ಭಾರತದಲ್ಲಿ ಉರ್ದು ಮತ್ತು ಪರ್ಷಿಯನ್ ಕವಿತೆಯ ಸ್ವರೂಪವನ್ನೇ ಪೂರ್ತಿಯಾಗಿ ಬದಲಾಯಿಸಿ ಪುನರ್‍ರಚನೆ ಮಾಡಿದ. ಸಯ್ಯದ್ ಮೀರ್ ಹಸನ್ ಎಂಬ ಮೌಲ್ವಿಯಿಂದ ಪ್ರಭಾವಿತನಾಗಿ ವಿದ್ಯಾರ್ಥಿಯಾಗಿದ್ದಾಗಲೇ ಉರ್ದು ಕವಿತೆಯನ್ನು ಬರೆಯಲಾರಂಭಿಸಿದ. ಅನಂತರ ತನ್ನ ದಾರ್ಶನಿಕ ವಿಚಾರಗಳಿಗೆ ಪರ್ಷಿಯನ್ ಭಾಷೆಯೇ ತಕ್ಕುದೆಂದು ಭಾವಿಸಿ ಅದನ್ನು ಕವಿತೆಯ ಅಭಿವ್ಯಕ್ತಿಗೆ ವಿಶೇಷವಾಗಿ ಗ್ರಹಿಸಿದ. ಆದರೂ ಶ್ರೇಷ್ಠ ಆಧುನಿಕ ಉರ್ದು ಕವಿಗಳು, ಪರವರ್ತಿ (ಅನಂತರದ) ಉರ್ದು ಕವಿಗಳ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದ್ದಾನೆ. ಈತನ ಮುಖ್ಯವಾದ ಕೃತಿಗಳು ಪರ್ಷಿಯನ್ ಭಾಷೆಯಲ್ಲಿವೆ. ತಾನು ಪರ್ಷಿಯನ್ ಭಾಷೆಯ ರಹಸ್ಯವಾದ ಶ್ರೇಷ್ಠ ಕವಿ ಜಲಾಲುದ್ದೀನ್ ರೂಮಿಯ ಶಿಷ್ಯನೆಂದು ಹೇಳಿಕೊಂಡಿದ್ದಾನೆ. ಮನುಷ್ಯನ ಮಹತ್ತ್ವವನ್ನೂ ಅವನ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಶಕ್ತಿ ಸಾಮಥ್ರ್ಯಗಳನ್ನೂ ಗುರುತಿಸಿ, ಅವುಗಳ ಉಪಯೋಗವನ್ನು ಪಡೆಯಲು ಮತ್ತು ಅವನ ಹುಟ್ಟುವಿಕೆಯ ಉದ್ದೇಶವನ್ನು ಪೂರ್ತಿ ಮಾಡಿಕೊಳ್ಳಲು ಅವನ್ನು ಬಳಸಲು ಯೋಗ್ಯವಾದ ಖುದೀ (ಆತ್ಮ) ದರ್ಶನವನ್ನು ಪ್ರತಿಪಾದಿಸಿದ್ದಾನೆ. ಸೃಷ್ಟಿಯ ಸಾರವೆನಿಸಿದ ಮನುಷ್ಯನ ಜೀವನವೇ ಆತನ ಕವನಗಳು ಮತ್ತು ದರ್ಶನದ ಮುಖ್ಯ ವಿಷಯ. ನೀತಿ ಮತ್ತು ಕ್ರಿಯಾಶೀಲತೆಯನ್ನು ಒತ್ತಿ ಹೇಳಿದ್ದಾನೆ. ಭಾಗ್ಯವಾದವನ್ನು ತೀವ್ರವಾಗಿ ಖಂಡಿಸುತ್ತಾನೆ. ತನ್ನ ಸಿದ್ಧಾಂತಗಳಲ್ಲಿ ಪ್ರಗತಿ ಮನೋಭಾವವನ್ನು ವ್ಯಕ್ತಪಡಿಸಿದ್ದಾನೆ. ಇಸ್ಲಾಂ ಮತ್ತು ಅದರ ಅನುಚರರ ದರ್ಶನ ಭಾವವನ್ನೂ ಪೂರ್ವದ ಆಧ್ಯಾತ್ಮವನ್ನೂ ಬಲಪಡಿಸಿದ್ದಾನೆ. ಪಯಾಮೆ ಮಶರಿಕ್ (ಪೂರ್ವದ ಸಂದೇಶ) ಗಯಟೆಯ ದೀವಾನ್ ಮಗ್‍ರಬೀಗ (ಪಶ್ಚಿಮದ ವಿಚಾರ ಸಂಗ್ರಹ) ಕುತೂಹಲಕಾರಿಯಾದ ಉತ್ತರವಾಗಿದೆ. ತನ್ನ ಕೃತಿಗಳಲ್ಲಿ ಹಿಂದೂ, ಸಿಖ್ ಮತ್ತು ಬೌದ್ಧ ಸಂತರನ್ನು ಆದರದ ದೃಷ್ಟಿಯಿಂದ ನೋಡಿದ್ದಾನೆ. ಸಂಸ್ಕøತ ಕವಿಗಳ ಕೃತಿಗಳಿಂದ ಉದಾಹರಿಸಿದ್ದಾನೆ. ಮುಸ್ಲಿಮರಿಗೆ ಸಮಾಜಸುಧಾರಕನಾಗಿ ಮತ್ತು ಕ್ರಾಂತಿದರ್ಶಿಯಾಗಿ ಕೋಮಿನ ಮೈತ್ರಿಯನ್ನು ಬಲಪಡಿಸಿದ್ದಾನೆ. ಭಾರತದಲ್ಲಿ ಸ್ವರಾಜ್ಯಭಾವವನ್ನು ದೃಢಪಡಿಸಿದ್ದಾನೆ. ಭಾರತದ ಜನಜೀವನದ ಮೇಲೆ ಬೀಳುತ್ತಿದ್ದ ಪಾಶ್ಚಾತ್ಯ ಪ್ರಭಾವವನ್ನು ಅಕ್ಷರಶಃ ವಿರೋಧಿಸಿದ್ದಾನೆ. ಈತನ ಲಕ್ಷ್ಯವೆಲ್ಲ ಸಮಾಜವಾದಿ ಸಿದ್ಧಾಂತದತ್ತ ಇತ್ತು. 

ಉರ್ದು, ಪರ್ಷಿಯನ್, ಅರಬ್ಬೀ, ಇಂಗ್ಲಿಷ್‍ಗಳಲ್ಲಿ ಇಕಬಾಲ್ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಇವುಗಳಲ್ಲಿನ ಪರ್ಷಿಯನ್ ಭಾಷೆಯ ಏಳು ಕೃತಿಗಳು, ಉರ್ದುವಿನ ಮೂರು ಕವನ ಸಂಕಲನಗಳು ಇಂಗ್ಲಿಷ್, ಅರಬ್ಬೀ ಮುಂತಾದ ಭಾಷೆಗಳಿಗೆ ಅನುವಾದವಾಗಿವೆ. 							
(ಎಂ.ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ